ಅಂಜೂರ, ಕಣಜ ಮತ್ತು ಮ್ಯೂಚುವಾಲಿಸ್ಮ್

30 September,2014

ಅಂಜೂರ, ಕಣಜ ಮತ್ತು ಮ್ಯೂಚುವಾಲಿಸ್ಮ್  

ಮುಂದುವರಿದ ತಂತ್ರಜ್ಞಾನದಯುಗವಾದ ಈ ಕಾಲದಲ್ಲಿ ಇಡೀ ವಿಶ್ವವೇ ಒಂದು ಪುಟ್ಟ ಊರಿದ್ದಂತೆ. ಜಗತ್ತಿನ ಯಾವುದೋ ಮೂಲೆಯಲ್ಲಿರೋ ಒಬ್ಬ ವ್ಯಕ್ತಿಯೊಂದಿಗೆ ತಂತ್ರಜ್ಞಾನದ ಮೂಲಕ ಕ್ಷಣಮಾತ್ರದಲ್ಲೇ ಸಂಪರ್ಕ ಸಾಧಿಸಲು ಬಲ್ಲ ನಮಗೆ ಪಕ್ಕದ ಮನೆಯಲ್ಲಿರುವವರ ಪರಿಚಯವೇ ಇರುವುದಿಲ್ಲ. ನಾನು ನನ್ನದು ಅನ್ನೋ ಮನೋಭಾವನೆಯ ಈ ಕಾಲದಲ್ಲಿ, ಮಾನವ ‘ಸಂಘಜೀವಿ’ ಅನ್ನೋದು ನಿಜವೇ ಅನ್ನೋ ಪ್ರಶ್ನೆ ಉದ್ಭವಿಸುತ್ತದೆ. ಸಹಜೀವನ ಅನ್ನೋದು ಮನುಷ್ಯರ ಜೀವನದಲ್ಲಿ ಮೌಲ್ಯ ಕಳೆದುಕೊಳ್ಳುತ್ತಿರಬಹುದು, ಆದರೆ ಪ್ರಾಣಿ ಪಕ್ಷಿ ಕೀಟ ಮತ್ತು ಸೂಕ್ಷ್ಮಾಣು ಜೀವಿಗಳ ಪ್ರಪಂಚದಲ್ಲಿ ಸಹಜೀವನದ ಬಾಹುಳ್ಯ ಮತ್ತು ಪ್ರಾಬಲ್ಯ ಎದ್ದು ಕಾಣುತ್ತದೆ.

ವಿಧವಿಧದ ಸಸ್ಯಗಳ ನಡುವೆ, ಪ್ರಾಣಿಗಳ ನಡುವೆ, ಬಗೆ ಬಗೆಯ ಕೀಟಗಳ ನಡುವೆ ಅಥವಾ ಪ್ರಾಣಿ – ಸಸ್ಯ, ಸಸ್ಯ –  ಕೀಟ, ಕೀಟ – ಸೂಕ್ಷ್ಮಾಣು ಜೀವಿ ಇತ್ಯಾದಿ ಹಲವಾರು ಬಗೆಬಗೆಯ ಜೋಡಿಗಳಲ್ಲಿ ಸಹಬಾಳ್ವೆ ಇರುವುದು ಕಂಡು ಬಂದಿದೆ. ಸಹಬಾಳ್ವೆಗಳಲ್ಲಿ ಹಲವು ಪ್ರಕಾರಗಳಿವೆ. ಪ್ರತಿಯೊಂದು ಬಗೆಯ ಸಹಬಾಳ್ವೆಯ ಉದ್ದೇಶವೂ ಸಾಮಾನ್ಯವಾಗಿ ಎರಡೂ ಬಗೆಯ ಜೀವಿಗೂ ಪರಸ್ಪರ ಅನುಕೂಲವಾಗುವುದಾಗಿರುತ್ತದೆ.

ಸಹಬಾಳ್ವೆ ಅಥವಾ ‘ಸಿಂಬಯೋಸಿಸ್’ನಾ ಒಂದು ಮುಖ್ಯ ಪ್ರಕಾರವೇ ‘ಮ್ಯೂಚುವಾಲಿಸ್ಮ್’ ಅಥವಾ ಪರಸ್ಪರಾವಲಂಬನೆ. ಪರಸ್ಪರಾವಲಂಬನೆಯ ಒಂದು ಸುಂದರ ಉದಾಹರಣೆಯೇ ಅಂಜೂರದ ಹಣ್ಣು ಮತ್ತು ಕಣಜದ ನಡುವಿನ ಸಂಬಂಧ. ‘ ಅಗವೊನಿಡೇ’ ಅನ್ನೋ ಕುಟುಂಬಕ್ಕೆ ಸೇರಿದ ಕಣಜ ಕೀಟ ಮತ್ತು ‘ಫೀಕಸ್ ಕರಿಕ’ ಅನ್ನೋ ಅಂಜೂರದ ಮರದ ನಡುವೆ ಕೋಟ್ಯಾಂತರ ವರ್ಷಗಳಿಂದ ಸಹಬಾಳ್ವೆ ನಡೆದುಬಂದಿದೆ. ಈ ಸಂಬಂಧದ ಅಸ್ತಿತ್ವಕ್ಕೆ ಇರುವ ಮುಖ್ಯ ಕಾರಣವೇ ಇವೆರಡೂ ಜೀವಿಗಳಿಗಿರುವ ಅನಿವಾರ್ಯತೆ.

Philotrypesis-caricae-femelle-2

ಕಣಜ (Wasp)

ಯಾವುದೇ ಗಿಡವು ತನ್ನ ಹೊಸ ಸಂತತಿಯನ್ನು ಹುಟ್ಟು ಹಾಕುವುದು ಬೀಜಗಳ ಉತ್ಪಾದನೆ ಮತ್ತು ಪ್ರಸರಣದಿಂದ. ಆದರೆ ಅಂಜೂರದ ಹಣ್ಣು ಸಂಪೂರ್ಣ ಮುಚ್ಚಿದ ‘ಸೈಕೋನಿಯಂ’ ಅನ್ನೋ ಬಗೆಯ ಹಣ್ಣಾದ್ದರಿನ್ದ ಅದು ತನ್ನೊಳಗೆ ಹೆಣ್ಣು ಮತ್ತು ಗಂಡು ಹೂಗಳನ್ನು ಹೊಂದಿರುತ್ತದೆ ಮತ್ತು ಅವು ಹೊರ ಜಗತ್ತಿನ ಸಂಪರ್ಕಕ್ಕೆ ಬಂದಿರುವುದಿಲ್ಲ.  ಹೆಣ್ಣು ಹೂಗಳ ಮೇಲೆ, ಪರಾಗವನ್ನು ಸಿನ್ಪಡಿಸದೆ ಇದ್ದರೆ ಅವು ಹೊಸ ಬೀಜಗಳನ್ನು ಉತ್ಪಾದಿಸಲಾಗುವುದಿಲ್ಲ. ಆದರೆ ಆ ಹೂಗಳು ಅಪಕ್ವ ಅಂಜೂರ ಹಣ್ಣಿನ ಒಳಗೆ ಅಡಗಿರುವುದರಿಂದ, ಮತ್ತೊಂದು ಅಂಜೂರದ ಗಿಡದ ಗಂಡು ಪರಾಗವು ಇದರ ಸಂಪರ್ಕಕ್ಕೆ ಬರಲು ಸಾಧ್ಯವಿಲ್ಲ. ಇಂತಹ ಹಣ್ಣಿನ ಒಳಕ್ಕೆ ಪರಾಗವನ್ನು ಹೊತ್ತೊಯ್ಯುವ ಕೆಲಸವನ್ನು ಕಣಜ ಕೀಟವು ಮಾಡುತ್ತದೆ. ಅದರಲ್ಲೂ ಒಂದು ಹೆಣ್ಣು ಕಣಜ ಕೀಟವು ಒಂದು ಅಂಜೂರ ಹಣ್ಣಿನಲ್ಲಿರುವ ಗಂಡು ಪರಾಗವನ್ನು ತನ್ನ ಮೈಗೆ ಮೆತ್ತಿಕೊಂಡು ಇನ್ನೊಂದು ಅಂಜೂರ ಹಣ್ಣಿನ ಬಳಿಗೆ ಹೋಗುತ್ತದೆ. ಈ ಅಂಜೂರದ ಮೇಲ್ಮೈಯಲ್ಲಿರುವ ‘ಓಸ್ಟಿಯೋಲ್’ ಅನ್ನೋ ಒಂದು ರಂಧ್ರದ ಮೂಲಕ ಹಣ್ಣಿನ ಒಳಸೇರುತ್ತದೆ. ಈ ಒಳಹೊಗುವ ಪ್ರಕ್ರಿಯೆಯಲ್ಲಿ, ‘ಓಸ್ಟಿಯೋಲ್’ ರಂಧ್ರವು ಬಹಳ ಪುಟ್ಟಾದಾಗಿರುವುದರಿಂದ ಒಳಹೊಗುತ್ತಿರುವ ಕಣಜವು ತನ್ನ ಕೈ ಕಾಲು ಮತ್ತು ರೆಕ್ಕೆಯನ್ನು ಕಳೆದುಕೊಳ್ಳುತ್ತದೆ. ಒಳಸೇರಿದ ನಂತರ ತನ್ನ ಮೇಲಿದ್ದ ಗಂಡು ಪರಾಗವನ್ನು ಈ ಹಣ್ಣಿನೊಳಗಿರುವ ಹೆಣ್ಣು ಹೂವಿನ ಮೇಲೆ ಸಿಂಪಡಿಸುತ್ತದೆ. ತನ್ನ ಕೈ ಕಾಲು ರೆಕ್ಕೆಗಳನ್ನು ಕಳೆದುಕೊಂಡಿರುವುದರಿಂದ ಅದು ಮುಂದೆಲ್ಲೂ ಹೋಗಲಾರದೆ ಅಲ್ಲೇ ಸಾವನ್ನಪ್ಪುತ್ತದೆ. ಈಗ ಹೆಣ್ಣು ಹೂಗಳಿಗೆ ಪರಾಗ ದೊರೆತಿರುವುದರಿಂದ ಅವು ಬೀಜವನ್ನು ಉತ್ಪಾದಿಸಲು ಸಾಧ್ಯವಾಗುತ್ತದೆ.

figwasp1

ಅಂಜೂರ ಹಣ್ಣು (Fig fruit)

ಕಣಜದ ಹುಳುವು ಅಂಜೂರದ ಗಿಡದ ಸಹಾಯವನ್ನೇನೋ ಮಾಡಿತು. ಜೊತೆಯಲ್ಲೇ ತನ್ನ ಸ್ವಕಾರ್ಯವನ್ನೂ ಮಾಡಿಕೊಂಡಿತು. ಅಂಜೂರದ ಹಣ್ಣಿನೊಳಗೆ ಸೇರುವ ಕಣಜದ ಹುಳುವು ತಾನು ಸಾಯುವ ಮುನ್ನ ಪರಾಗಸ್ಪರ್ಶದ ಜೊತೆಯಲ್ಲೇ ತನ್ನ ಮೊಟ್ಟೆಗಳನ್ನೂ ಆ ಹಣ್ಣಿನ ಒಡಲಲ್ಲಿ ಸೇರಿಸುತ್ತದೆ. ಹೀಗಾಗಿ ತಾನು ಅಸುನೀಗಿದರೂ ತನ್ನ ಸಂತತಿಗೆ ಹುಟ್ಟಲು ಮತ್ತು ಬೆಳೆಯಲು ಪ್ರಶಸ್ತವಾದ ತಾಣವನ್ನು ಆಯ್ದಿರುತ್ತದೆ. ಈ ಕಣಜದ ಮೊಟ್ಟೆಗಳಿಂದ ಹೊರಬರುವ ಹಲವಾರು ಹೆಣ್ಣು ಮತ್ತು ಗಂಡು ಕಣಜಗಳು ಮೊದಲು ‘ಲಾರ್ವಾ’ ಹಂತವನ್ನು ತಲುಪಿ, ನಂತರ ‘ಪ್ಯೂಪ’ ಹಂತವನ್ನು ಮುಗಿಸಿ ಪ್ರಬುದ್ಧವಾಗುತ್ತವೆ. ಹೀಗೆ ಬೇರೆ ಬೇರೆ ಕಣಜ ಹುಳುಗಳ ಸಂತತಿ ಆ ಹಣ್ಣಿನ ಒಡಲಲ್ಲಿರುತ್ತವೆ. ಅಲ್ಲಿ ಪ್ರಬುದ್ಧ ಹೆಣ್ಣು ಮತ್ತು ಗಂಡು ಕಣಜಗಳ ಮಿಲನವಾಗುತ್ತದೆ. ನಂತರ ಗಂಡು ಕಣಜಗಳು ಅಂಜೂರದ ಹಣ್ಣಿನ ಒಳಗಿನಿಂದ ಹೊರಕ್ಕೆ ಒಂದು ಸುರಂಗ ಮಾರ್ಗವನ್ನು ಕೊರೆದು, ಹೊರ ಹೋಗಿ , ಕೆಲವೇ ಕ್ಷಣಗಳಲ್ಲಿ ಸಾಯುತ್ತವೆ. ಆ ಸುರಂಗ ಮಾರ್ಗದಿಂದ ಹೆಣ್ಣು ಕಣಜಗಳು ಹೊರಹೋಗುತ್ತವೆ. ಹೀಗೆ ಹೊರ ಬಂದ ಹೆಣ್ಣು ಕಣಜಗಳು, ತಮ್ಮ ಮೈ ಮೇಲೆ ಅಂಜೂರದ ಹಣ್ಣಿನ ಗಂಡು ಪರಾಗವನ್ನು ಮೆತ್ತಿಕೊಂಡಿರುತ್ತವೆ. ಈ ಪರಾಗದೊಂದಿಗೆ ಅವು ಮುಂದಿನ ಅಂಜೂರದ ಗಿಡದತ್ತ ಪಯಣ ಬೆಳೆಸುತ್ತವೆ.

ಹೀಗೆ ಪರಸ್ಪರಾವಲಂಬನೆಯಿಂದ ಕಣಜದ ಹುಳು ಮತ್ತು ಅಂಜೂರದ ಹಣ್ಣು ಒಂದಕ್ಕೊಂದು ಆಸರೆಯಾಗಿರುತ್ತವೆ ಮತ್ತು ಒಂದರ ಜೀವನ ಚಕ್ರದಲ್ಲಿ ಮತ್ತೊಂದು ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತವೆ. ನಮ್ಮ ಪರಿಸರದಲ್ಲಿ ಇಂತಹ ಹಲವಾರು ಸಹಬಾಳ್ವೆಯ ಜೀವನಚಕ್ರಗಳಿರುವುದರಿಂದ, ಬುದ್ಧಿವಂತ ಪ್ರಾಣಿ ಎನಿಸಿಕೊಂಡ ಮಾನವ ಅವುಗಳಲ್ಲಿ ಮೂಗು ತೂರಿಸದೆ ಇದ್ದರೆ, ಪರಿಸರವ್ಯವಸ್ಥೆಯು ತನ್ನ ಪಾಡಿಗೆ ತಾನು ಸುಲಲಿತವಾಗಿ ಸಮತೋಲನವನ್ನು ಕಾಪಾಡಿಕೊಳ್ಳುತ್ತದೆ. ಆದರೆ ಮಾನವನು ವಿವೇಚನಾರಹಿತನಾಗಿ ನಡೆದುಕೊಂಡರೆ, ಪರಿಸರವು ನಿರ್ವಾಹವಿಲ್ಲದೆ ತನ್ನ ಕಾಠಿಣ್ಯವನ್ನು ವಿಕೋಪಗಳ ಮೂಲಕ ಸಾರುತ್ತದೆ.

Conservation starts today… and with you! 🙂

Join us in conservation efforts!    https://www.facebook.com/NaturalistsByChoice

Guest Author – Ms. Kshama.V. Bhanuprakash

PP Ms. Kshama.V.Bhanuprakash , an M.Sc in Microbiology from Bangalore university – a Bangalorean at heart with a  passion for understanding small things and changes around her with a remarkable oratory and writing skills ; she  is  a  regular science columnist in a Kannada daily, with over 75 science articles published so far on what she has  been  witness to and her observation on plant,animal and the insect world.

A guest author at Naturalists by choice (NBC), she is determined to make you take notice of the changes in the  ecology around you and work for the betterment to revive it.

Stay tuned for more on her blogs!

 Join her and Team NBC in conservation efforts. Reach us at –      nbc.mkphotography@gmail.com / https://www.facebook.com/NaturalistsByChoice

One comment

  1. Aditya Vasishta · · Reply

    Very well written. Good message from the story.

Leave a comment